• Nandini FHS Layout, Next to Presidency School, Bengaluru-560096

  • +91 8904645529

  • Mail Support: biffesblr@gmail.com

  • Mon - Sat: 10.30am - 05.30pm

16th BIFFes

ಚಿತ್ರೋತ್ಸವದ ಬಗ್ಗೆ

ಬಿಫೆಸ್ ಬಗ್ಗೆ

#BIFFes

ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಸಾಂಸ್ಕೃತಿಕ ವೈಭವದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ, ಫಿಯಾಫ್ (FIAPF) ಮಾನ್ಯತೆ ಪಡೆದಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೆಜ್ಜೆ ಗುರುತುಗಳು ಐತಿಹಾಸಿಕವಾಗಿವೆ. 2006 ರಲ್ಲಿ ರೂಪುತಳೆದು ವರ್ಷದಿಂದ ವರ್ಷಕ್ಕೆ ಎಲ್ಲ ವಿಧದಲ್ಲೂ ಔನ್ನತ್ಯಕ್ಕೇರಿದ್ದಲ್ಲದೆ, ಕಳೆದ 15 ವರ್ಷಗಳ ನಡೆಯಲ್ಲಿ ಪ್ರಬುದ್ಧ ಚಲನಚಿತ್ರೋತ್ಸವ ಎಂಬ ಮೌಲ್ಯವನ್ನು ಸಂಪಾದಿಸಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ನಮ್ಮ ಕನ್ನಡ ನಾಡಿನ ಸಿನಿಮಾಪ್ರಿಯರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವೆಂದರೆ ಹಬ್ಬವೇ ಸರಿ. ಸಿನಿಮಾ ರಂಗದ ಪ್ರಯೋಗಗಳು, ದೃಶ್ಯಸಾಧ್ಯತೆಗಳು ಮತ್ತು ಬೆಳವಣಿಗೆ ಎಲ್ಲವೂ ಒಗ್ಗೂಡಿದ ದೃಶ್ಯಾನುಭೂತಿಯನ್ನು 16ನೇ ಚಲನಚಿತ್ರೋತ್ಸವದಲ್ಲಿ ಕಾಣಲಿದ್ದೀರಿ.

ಕರ್ನಾಟಕ ಸರ್ಕಾರದ ವತಿಯಿಂದ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತಿದ್ದು, ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗವಿದ್ದೇ ಇದೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್‌ 1 ರಿಂದ 8, 2025 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ನಾಟಕದ ವೈಭವೋಪೇತ ಐತಿಹಾಸಿಕ ಪರಂಪರೆ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಿನಿಮಾ ಕ್ಷೇತ್ರಗಳ ಸಾಧನೆಗಳ ನಡುವೆಯೇ ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಂಗಳೂರು ಬೆಳೆದು ನಿಂತಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿಂದಿನ ಆವೃತ್ತಿಗಳಲ್ಲಿ ಪ್ರತಿ ವರ್ಷವೂ 60ಕ್ಕೂ ಹೆಚ್ಚು ರಾಷ್ಟ್ರಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ, ಸರಿ ಸುಮಾರು 400 ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಪ್ರತಿ ಆವೃತ್ತಿಯಲ್ಲೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ವಿವಿಧ ಸಂವೇದನೆ, ವಸ್ತು ವೈವಿಧ್ಯ, ಬಹುತ್ವ ಮತ್ತು ವಿಶಿಷ್ಟ ಧ್ವನಿಗಳಿರುವ ಚಲನಚಿತ್ರಗಳನ್ನು ವೀಕ್ಷಿಸಿ, ಸಿನಿಮಾಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿರುವುದು ಗಮನಾರ್ಹ ಸಂಗತಿ.

ಹಿಂದಿನ ಚಿತ್ರೋತ್ಸವದಲ್ಲಿದ್ದಂತೆ ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗಗಳಿರುತ್ತವೆ. ಪ್ರಶಸ್ತಿ ಪುರಸ್ಕೃತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿಯೂ ಇದ್ದು, ಚಲನಚಿತ್ರೋತ್ಸವ ಮುಕ್ತಾಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಚಿತ್ರೋತ್ಸವದಲ್ಲಿ ಸಿನಿಮಾಗಳ ಪ್ರದರ್ಶನದೊಂದಿಗೆ ಚಲನಚಿತ್ರ ಶೈಕ್ಷಣಿಕ ಸಂವಾದವನ್ನೂ ಏರ್ಪಡಿಸಲಾಗಿದೆ. ಚಲನಚಿತ್ರ ನಿರ್ಮಾಣ, ರಸಗ್ರಹಣ, ವಿಚಾರಸಂಕಿರಣ, ಕಾರ್ಯಾಗಾರ, ಮಾಸ್ಟರ್ ಕ್ಲಾಸ್ ಮೊದಲಾದ ಕಾರ್ಯಕ್ರಮಗಳು ಚಲನಚಿತ್ರ ರಂಗದವರಿಗೆ, ಅಧ್ಯಯನಶೀಲರಿಗೆ, ಚಲನಚಿತ್ರಾಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಚಲನಚಿತ್ರ ಸಂಸ್ಕೃತಿಯನ್ನು ತಿಳಿಯುವ ಜೊತೆಗೆ, ಚಿತ್ರೋತ್ಸವದ ಸಿನಿಮಾಗಳು ಸಮಕಾಲೀನ ಜಾಗತಿಕ ವಿದ್ಯಮಾನ ಮತ್ತು ಸ್ಥಿತಿಗತಿಗಳನ್ನು ಬಿಂಬಿಸುತ್ತವೆ. ಚಲನಚಿತ್ರಕರ್ಮಿಗಳಿಗೆ, ಚಲನಚಿತ್ರಾಸಕ್ತ ವಿದ್ಯಾರ್ಥಿಗಳಿಗೆ ಚಿತ್ರೋತ್ಸವ ಒಂದು ಅರಿವಿನ ತಾಣವಾಗಲಿದೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ರಂಗದವರು ಹಾಗೂ ಚಿತ್ರ ನಿರ್ಮಾಣ ಸಂಸ್ಥೆಗಳು, ವಿಮರ್ಶಕರು, ಸಿನಿಮಾ ಪ್ರೇಮಿಗಳು, ವಿದ್ಯಾರ್ಥಿಗಳು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಚಲನಚಿತ್ರ ವಿತರಕರು ಹಾಗೂ ಎಲ್ಲಾ ಸಹೃದಯ ಸಿನಿಮಾಸಕ್ತರು ಪಾಲ್ಗೊಳ್ಳಬೇಕೆಂದು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಈ ಸದಾವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ. ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳುವ ಮೂಲಕ ಸಂವೇದನಾಶೀಲ ವಿಶ್ವ ಮತ್ತು ದೇಶೀಯ ಸಿನಿಮಾಗಳನ್ನು ಆಸ್ವಾದಿಸೋಣ. ಹಾಗೆಯೇ, ಸೃಜನಾತ್ಮಕ ಚಲನಚಿತ್ರ ಶೈಕ್ಷಣಿಕ ಕಾರ್ಯಕ್ರಮಗಳಲ್ಲೂ, ಸಂವಾದಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳೋಣ.